ಅಮ್ಮ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ ಆದರೆ ನನಗೆ ನನ್ನ ಅಮ್ಮ(ಲಲಿತ) ಅಂದ್ರೆ ಎಲ್ಲರಿಗಿಂತ ಹೆಚ್ಚು ಇಷ್ಟ. ನಾನು ಚಿಕ್ಕವಳಿದ್ದಾಗ ಅಮ್ಮನನ್ನು ಬಿಟ್ ಇರ್ತಾನೇ ಇರ್ಲಿಲ್ಲ. ಅವ್ರು ಎಲ್ ಹೋದ್ರೂ ಅವರ ಹಿಂದೆನೇ ಹೋಗ್ತಿದ್ದೆ. (ಈಗ್ಲೂ ಸ್ವಲ್ಪ ಹಾಗೇ ಅಂದ್ಕೊಳಿ 🙈) ಅದ್ನ ನೋಡಿ ನನ್ನ ಅಮ್ಮನ ಬಾಲ ಅಂತಿದ್ರು, ಹಹಹ.
ನಂದು ಹಾಗೂ ಅಮ್ಮಂದು ಬಿಡಿಸಲಾಗದ ನಂಟು ಅಂತಾರಲ್ಲ ಹಾಗೆ.(ದೇವ್ರೇ.. ಯಾರ್ದೂ ಕಣ್ ಬೀಳ್ದೇ ಇರ್ಲಿ 🙏🏻) ಅವರೆಲ್ಲಾದ್ರೂ ಹೋದ್ರೆ ಅವ್ರ ಜೊತೆಗೇ ಹೋಗ್ತಿದ್ದೆ. ನನ್ನನ್ನ ಬಿಟ್ಟು ಎಲ್ಲಿಗೂ ಹೋಗೋಕ್ ಬಿಡ್ತಿರ್ಲಿಲ್ಲ, ಅವ್ರೂ ಹೋಗ್ತಿರ್ಲಿಲ್ಲ.. 😬 ಆದ್ರೆ ನನ್ನ ಅಣ್ಣ ಹಾಗಲ್ಲ, ಅವನು ರಜೆಗೆ ಆಂಟಿ-ಅಜ್ಜಿ ಮನೆಗೆಲ್ಲ ಹೋಗಿ ಬರ್ತಿದ್ದ. ನಾನು ಮಾತ್ರ ಅಮ್ಮನ ಜೊತೆಲೇ ಇರ್ತಿದ್ದೆ. ಅಮ್ಮ ಮಾತ್ರ ಅಲ್ಲ, ಅಪ್ಪ ಅಂದ್ರೂ ನಂಗೆ ತುಂಬಾ ಇಷ್ಟ. ಆದ್ರೆ ಅಮ್ಮ ಯಾವಾಗಲೂ ಜೊತೆಲೇ ಇರಬೇಕಿತ್ತು.
ಈಗಲೂ ಅಷ್ಟೇ.. ನನ್ನ ಪ್ರೀತಿಯ ಅಮ್ಮನ ಜೊತೆ ಸುತ್ತೋದಂದ್ರೆ ನಂಗೆ ತುಂಬಾ ಇಷ್ಟ.. ಸುತ್ತಾಟ ಅಂದಾಗ ಚಿಕ್ಕೋಳಿದ್ದಾಗಿನ ಒಂದು ಘಟನೆ ನೆನಪಾಯ್ತು. ಚಿಕ್ಕವಳಿದ್ದಾಗ ನಮ್ ಅಪ್ಪ ನಮ್ಮನ್ನೆಲ್ಲ ಬೆಂಗಳೂರಿನ ಅಜ್ಜಿ-ತಾತನ ಮನೆಗೆ ಬಿಟ್ಟು ಹೋಗೋಕೆ ಜೊತೆಲೇ ಬರ್ತಿದ್ರು. ಬಿಟ್ಟು ವಾಪಸ್ ಹೋಗ್ಬೇಕಿತ್ತು ಯಾಕಂದ್ರೆ ಅಲ್ಲಿ ನಮ್ಮ ಬೇಕರಿ, ಬಿಸಿನೆಸ್, ಕೆಲಸದವರು ಅಂತ ಬ್ಯುಸಿ ಇರ್ತಿದ್ರು.

ಹಾಗೆ ಒಂದಿನ ಬಂದಾಗ ಅಣ್ಣಂಗೆ ನಂಗೆ ನನ್ ಜೊತೆ ವಾಪಸ್ ಬನ್ನಿ, ಅಮ್ಮ ಆರಾಮಾಗ್ ಇರ್ಲಿ, ಮತ್ತೆ ಎರಡು ದಿನ ಬಿಟ್ಟು ಅಮ್ಮನ್ನ ಕರ್ಕೊಂಡ್ ಹೋಗೋಕೆ ವಾಪಸ್ ಬರೋಣ ಅಂದ್ರು. ಅಣ್ಣ ಒಪ್ಪಿದ, ಆದ್ರೆ ನಾನು ಬರಲ್ಲ ಅಂದೆ. ಅಮ್ಮನೂ ಹೋಗು ಪುಟ್ಟ ಅಂದ್ರು, ಉಹೂಂ ಹೋಗಲ್ಲ ಅಂದೆ. (ನಾನು ಹೋದ್ರೆ ಎರಡು ದಿನ ಅವರ ಪೇರೆಂಟ್ಸ್ ಜೊತೆ ಆರಾಮಾಗಿ ಇರ್ಬೋದು ಅಂತ ಅಮ್ಮ ಅಂದ್ಕೊಂಡಿದ್ರೇನೋ? )😦 ನಾನು ಹೋಗಲ್ಲ ಅಂದೆ.
ನಿಂಗೆ ಚಾಕ್ಲೇಟು, ಏನೇನ್ ಬೇಕೋ ಎಲ್ಲ ಕೊಡ್ತೀನಿ ಬಾ ಅಂದ್ರು ಅಪ್ಪ. ಹಹಹ.. ಅವರಿಗೆ ನನ್ನ ವೀಕ್ನೆಸ್ ಗೊತ್ತಿತ್ತು. ಚಾಕ್ಲೇಟ್ ಅಂದ್ರೆ ಯಾವ ಮಕ್ಕಳ ಮನಸು ಕರಗಲ್ಲ ಹೇಳಿ. ಆಯ್ತು ಬರ್ತೀನಿ ಅಂದೆ. ಹೊರಡೋ ಮುಂಚೆ, ನನ್ನ ತಿಂಡಿ-ಊಟ, ನಿದ್ರೆಯ ರುಟೀನ್ ಎಲ್ಲ ಅಮ್ಮ ಅಪ್ಪಂಗೆ ಹೇಳಿದ್ರು.
ರಾತ್ರಿ ಹತ್ತು ಗಂಟೆಗೆ ನಾವು ಚಿಕ್ಕಬಳ್ಳಾಪುರದಲ್ಲಿದ್ವಿ. ಅಪ್ಪ ಹೇಳ್ದಂಗೆ ಕೈತುಂಬಾ ಚಾಕ್ಲೇಟ್ ಕೊಟ್ರು. ನಮ್ ಅಪ್ಪನ ಕೆಲಸದೋರು ಚೆನ್ನಾಗ್ ನೋಡ್ಕೊಂಡ್ರು (ಎಷ್ಟೇ ಆದ್ರೂ ಓನರ್ ಮಕ್ಕಳು ಅಲ್ವಾ?). ಅಣ್ಣ ನಾನೂ ನಗ್ತ, ಚೆನ್ನಾಗಿ ಆಟ ಆಡ್ತಿದ್ವಿ. ರಾತ್ರಿ ಹನ್ನೊಂದೂವರೆ ಆಗಿತ್ತು ಅನ್ಸುತ್ತೆ. ನಾನು ಜೋರಾಗ್ ಅಳೋಕ್ ಶುರು ಮಾಡಿದೆ. ಅಪ್ಪ ಅಪ್ಪ ಅಂತ ಜೋರಾಗಿ ಕೂಗ್ದ ಅಣ್ಣ. ಅವರು ಏನಾಯ್ತು ಅಂತ ಗಾಬರಿಯಿಂದ ಬಂದ್ರು. ಕೈತುಂಬಾ ಕೊಟ್ಟ ಚಾಕ್ಲೇಟಲ್ಲಿ ಒಂದೇ ಒಂದು ಉಳಿದಿತ್ತು. ಏನಾಯ್ತು, ಯಾಕೆ ಅಂತೆಲ್ಲ ಕೇಳ್ತಿದ್ರೂ ನಾನು ಇರೋ ಒಂದು ಚಾಕ್ಲೇಟ್ ತಿಂತ ಅಮ್ಮ ಬೇಕು, ಬೆಂಗಳೂರಿಗೆ ಹೋಗೋಣ ಅಂತ ಅಳ್ತನೇ ಹೇಳ್ದೆ. ಈಗ್ಲೇ ತುಂಬಾ ರಾತ್ರಿ ಆಗ್ಬಿಟ್ಟಿದೆ. ಡ್ರೈವರ್ ಮನೆಗೆ ಹೋಗಾಯ್ತು , ಇಷ್ಟೊತ್ತಲ್ಲಿ ಬಸ್ ಕೂಡ ಇರಲ್ಲ, ಅಂತ ನಂಗೆ ಅಪ್ಪ ಸಮಾಧಾನ ಮಾಡೋಕ್ ಪ್ರಯತ್ನ ಮಾಡಿದ್ರು. ಅಷ್ಟರಲ್ಲಿ ಇರೋ ಒಂದ್ ಚಾಕ್ಲೇಟೂ ಖಾಲಿ ಆಯ್ತು, ನನ್ ಅಳು ಜೋರಾಯ್ತು. ಇನ್ ಇವಳನ್ನ ಸುಮ್ನಿರಿಸೋಕಾಗಲ್ಲ ಅಂತ ಅಪ್ಪಂಗೆ ಅರ್ಥ ಆಯ್ತು ಅನಿಸುತ್ತೆ. ಆವತ್ ರಾತ್ರಿ ಹನ್ನೆರಡೂವರೆಗೆ ನಮ್ಮಿಬ್ರನ್ನ ಕರ್ಕೊಂಡ್ ಬೆಂಗಳೂರಿಗೆ ಬರೋ ಲಾರಿ ಹತ್ತಿದ್ರು.. (ಪಾಪ ಅಪ್ಪ..)

ತಡರಾತ್ರೀಲಿ ಅಜ್ಜಿಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದಾಗ ಅಮ್ಮನೇ ಬಂದು ಬಾಗಿಲು ತೆಗೆದ್ರು. ನಮ್ಮನ್ನೆಲ್ಲ ಅಷ್ಟೊತ್ತಿನಲ್ಲಿ ನೋಡಿ ಅವರಿಗೆ ಶಾಕ್. ಏನು ಯಾಕೆ ಅಂತೆಲ್ಲ ಕೇಳ್ತಿರುವಾಗಲೇ ಎಲ್ಲ ಒಳಗೆ ಹೋದ್ವಿ. ನಾನು ಸೀದಾ ಅಮ್ಮನ ಮೈಮೇಲೇರಿ ಖುಷಿಯಿಂದ ತಬ್ಕೊಂಡು ಕೂತೆ. ನನ್ನ ತಲೆ ನೇವರಿಸ್ತ ಅವರು ಅಪ್ಪನ ಹತ್ರ ಏನಾಯ್ತು ಅಂತೆಲ್ಲ ಕೇಳ್ತಿದ್ರು. ಅಪ್ಪ ಕಥೆ ಹೇಳೋಕೆ ಶುರು ಮಾಡಿದ್ರು. ಆಗ ನಾನು ಮತ್ತೆ ಅಳೋಕೆ ಶುರು ಮಾಡ್ದೆ. ಅಲ್ಲಿವರೆಗೂ ನಗ್ತ ಆರಾಮಾಗಿದ್ದೆ, ಹಹಹ. ಆವತ್ತು ರಾತ್ರಿ ಅಲ್ಲೇ ಉಳಿದ ನಾವು ಮತ್ತೆ ವಾಪಸ್ ಹೋಗಿದ್ದು ರಜೆ ಮುಗಿದ್ ಮೇಲೇನೆ, ಅಪ್ಪ ಕೂಡ ನಮ್ ಜೊತೆಗೇ ಇದ್ರು.
ಆ ದಿನ ಆ ರಾತ್ರಿಯಲ್ಲಿ ಅಮ್ಮನ ಜೊತೆ ಹಾಗೆ ಕೂತಾಗ ಸಿಕ್ಕಿತ್ತಲ್ಲ ಆ ಕಂಫರ್ಟ್ಗೋಸ್ಕರನೇ ನಾನು ಅಷ್ಟೆಲ್ಲ ಅತ್ತು ರಂಪ ಮಾಡಿದ್ದು. ಅಮ್ಮನ ಜೊತೆಗಿದ್ದಾಗ ಸಿಗೋ ಕಂಫರ್ಟ್ ಬೇರೆ ಎಲ್ಲೂ ಸಿಗಲ್ಲ, ಬೇರೆ ಯಾರಿಂದಲೂ ಸಿಗೊಲ್ಲ. ಅಮ್ಮಾ.. ಐ ಲವ್ ಯೂ ಸೋ ಮಚ್..❤ ನನ್ನ ಅಮ್ಮನಿಗಷ್ಟೇ ಅಲ್ಲ, ಜಗತ್ತಿನ ಎಲ್ಲ ಅಮ್ಮಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು. 😀
-ಹರಿಪ್ರಿಯಾ
same as above comment
mattu
ammandira dinadandu nija amma ravarannu visheshavaagi darshana maadisiddakke nimagoo haagoo darshana needalu oppida tamagoo vishesha shubhaashayagalu.
ಎಷ್ಟಾದರೂ ಅಮ್ಮ ಅಮ್ಮನೇ ಅಲ್ವಾ..? ಅಮ್ಮನಷ್ಟು ಸಿಹಿ ಚಾಕ್ಲೇಟ್ ಕೊಡೋದಿಲ್ವಲ್ಲ
ನಿಮ್ ಅಮ್ಮನ ಹೆಸರು ಲಲಿತಾ ನಾ?
Super sis neevu
Convey my wishes to your mom for giving such a beautiful queen of my world…. Love ur family and u