ಮುಂದುವರಿದ ಭಾಗ..
‘ಒಂದಿನ ಅಣ್ಣಾವ್ರಿಗೆ ಆರಾಮಿಲ್ಲ ಅಂತ ಏನೋ ರೂಮರ್ಸ್ ಹಬ್ಬಿತ್ತು. ನೋಡ್ಕೊಂಡ್ ಬರೋಣ ಅಂತ ಅವ್ರ ಮನೆಗೆ ಹೋಗಿದ್ದೆ. ಸುಸ್ತಾಗಿದ್ರೂ ಅವ್ರು ಮನೇಲಿ ಉಪ್ಪಿಟ್ಟೆಲ್ಲ ಕೊಟ್ಟು 2 ಗಂಟೆ ಮಾತಾಡಿದ್ರು. ಬರ್ತಾ ಗೇಟ್ವರೆಗೂ ಬಂದು ಕೈ ಮುಗಿದು ಕಳಿಸ್ಕೊಟ್ರು. ಆಗ ಅವ್ರ ಕೈಗಳು ನಡುಗ್ತಿದ್ವು. ಆ ಸ್ಥಿತಿಯಲ್ಲೂ ನಮ್ಮನ್ನು ಅಷ್ಟು ಪ್ರೀತಿಯಿಂದ ಕಳಿಸಿಕೊಟ್ಟ ಅವ್ರ ಬಗ್ಗೆ ಹೆಮ್ಮೆ ಅನಿಸ್ತು, ಗೌರವ ಹೆಚ್ಚಾಯ್ತು. ಆವತ್ನಿಂದ ನಾನೂ ಅದ್ನ ರೂಢಿಸ್ಕೊಂಡೆ. ಆ ನಂತ್ರ ನಮ್ಮನೆಗೆ ಬಂದವ್ರನ್ನ ನಾನು ಹೇಗೆ ಇದ್ರೂ ಗೇಟ್ವರೆಗೂ ಬಂದು ಕಳಿಸಿಕೊಡ್ತಿದೀನಿ. ಆದ್ರೆ ಅಣ್ಣಾವ್ರು ಅಗಲಿದಾಗ ನಾನು ಮೆಲ್ಬೋರ್ನ್ನಲ್ಲಿದ್ದೆ, ಅಲ್ಲಿಂದ್ಲೇ ಶ್ರದ್ಧಾಂಜಲಿ ಸಲ್ಲಿಸಿದ್ವಿ’ ಅಂದ್ರು ದತ್ತಣ್ಣ.

‘ಆಮೇಲೆ.. ಎಚ್ಎಎಲ್ನಲ್ಲೂ ಕೆಲಸ ಮಾಡಿದ್ರಿ, ಸಿನಿಮಾ ಇಂಡಸ್ಟ್ರೀಲೂ ಇದೀರಿ. ನಿಮಗೆ ಯಾವುದು ಜಾಸ್ತಿ ಇಷ್ಟ?’ ಅಂತ ಕೇಳ್ದೆ. ‘ಎಚ್ಎಎಲ್ ಉದ್ಯೋಗದಿಂದ ಬೇರೆ ಬೇರೆ ಸ್ಥಳ ನೋಡೋಕೆ ಅವಕಾಶ ಸಿಕ್ತು. ತುಂಬಾ ಕಷ್ಟದ ವಿಷಯಗಳನ್ನೂ ನಿಭಾಯಿಸೋದು ಕಲಿತೆ. ಅದೊಂದು ಗ್ರೇಟ್ ಸರ್ವಿಸ್. ಇನ್ನು ಸಿನಿಮಾ, ನಟನೆ ಎಲ್ಲದರ ಬಗ್ಗೆ ನನಗೆ ಬಾಲ್ಯದಿಂದಲೂ ಆಸಕ್ತಿ. ಇಲ್ಲೂ ಬೇರೆ ಬೇರೆ ಸ್ಥಳ, ಬೇರೆ ಬೇರೆ ಥರದ ಜನರ ಒಡನಾಟ ಸಿಕ್ಕಿದೆ. ನಂಗೆ ಅಭಿನಯ ಅಂದ್ರೆ ಪ್ರೀತಿ, ಹೀಗಾಗಿ ಈ ಎರಡರಲ್ಲಿ ಯಾವುದು ಜಾಸ್ತಿ ಇಷ್ಟ ಅಂತ ಹೇಳೋಕಾಗಲ್ಲ, ನಂಗೆ ಎರಡೂ ಇಷ್ಟನೇ’ ಅಂದ್ರು. ಹಾಗೆ ಮಾತಾಡ್ತ ನಾವು ವಾಪಸ್ ಎಚ್ಎಎಲ್ನಲ್ಲಿ ಲ್ಯಾಂಡ್ ಆದ್ವಿ.
‘ಎರಡೂ ಫೀಲ್ಡ್ನಲ್ಲಿ ನಿಮ್ಮ ಮೋಸ್ಟ್ ಮೆಮೋರೇಬಲ್ ನೆನಪುಗಳು ಏನು?’ ಅಂತ ಕೇಳ್ದೆ. ‘ಎಚ್ಎಎಲ್ನಲ್ಲಿದ್ದಾಗ ನಾವೆಲ್ಲ ತುಂಬಾ ನೀಟಾಗಿರ್ಬೇಕಿತ್ತು. ಡೈಲಿ ಶೇವ್ ಮಾಡ್ಕೊಂಡು, ದಿನಾ ಫಾರ್ಮಲ್ಸ್ ಹಾಕೊಂಡಿರಬೇಕಿತ್ತು. ವರ್ಷಗಟ್ಟಲೆ ಹಾಗೆ ಇದ್ದು ಇದ್ದು ಬೇಜಾರಾಗಿತ್ತು. ಅದ್ಕೆ ಎಚ್ಎಎಲ್ ಬಿಟ್ಮೇಲೆ ಕೂದಲು ಉದ್ದ ಬಿಟ್ಟೆ, ಗಡ್ಡ ಬಿಟ್ಟೆ, ಜುಬ್ಬಾ ಪೈಜಾಮಾ ತೊಟ್ಟೆ’ ಅಂತ ಈಗಿನ ಗೆಟಪ್ಗೆ ಕಾರಣ ಹೇಳಿದ್ರು. ಜೊತೆಗೆ ಒಂದ್ ತಮಾಷೆ ವಿಷ್ಯ ಕೂಡ ಹೇಳಿದ್ರು. ‘ಎಚ್ಎಎಲ್ ಒಳಗೆ ಒಳ್ಳೇ ಕೆಫೆಟೇರಿಯಾ ಇದೆ, ನನ್ನ ರಂಗಭೂಮಿ ಫ್ರೆಂಡ್ಸ್ ಎಲ್ಲ ಅವರನ್ನೆಲ್ಲ ಅಲ್ಲಿಗೆ ಕರೆಸಿ ಪಾರ್ಟಿ ಕೊಡ್ಸು ಅಂತ ಒತ್ತಾಯಿಸೋರು. ಆದ್ರೆ ಡ್ರೆಸ್ ಕೋಡ್ ಬಗ್ಗೆ ಗೊತ್ತಿದ್ದ ನಾನು ಅವಾಯ್ಡ್ ಮಾಡ್ತಿದ್ದೆ. ಯಾಕಂದ್ರೆ ನಮ್ಮ ಡ್ರಾಮಾ ಟ್ರೂಪಲ್ಲಿ ಕೆಲವರು ಹೇಗೇಗೋ ಡ್ರೆಸ್ ಮಾಡ್ಕೊಂಡು ಇರೋರು. ಆದ್ರೂ ಒಂದಿನ ಪಾರ್ಟಿ ಕೊಡ್ಸೋಣ ಅಂತ ಡಿಸೈಡ್ ಮಾಡ್ದೆ. ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಬರೋರಿಗಷ್ಟೆ ಇನ್ವೈಟ್ ಮಾಡಿದ್ದೆ. ಹಾಗೆ ಎಲ್ರೂ ಎಚ್ಎಎಲ್ನಲ್ಲಿ ಸೇರಿ ಪಾರ್ಟಿ ಮಾಡ್ತಿದ್ದಾಗ ದೂರದಲ್ಲಿ ಯಾರೋ ಜುಬ್ಬಾ ಹಾಕೊಂಡು ಬರ್ತಿದ್ದು ಕಾಣಿಸ್ತು. ಗಮನಿಸಿದ್ರೆ ನಮ್ ಬಿ.ವಿ.ಕಾರಂತ. ನಾನು ಅವ್ನು ಒಳ್ಳೇ ಫ್ರೆಂಡ್ಸ್ ಆದ್ರೆ ನಾವು ಅವನನ್ನ ಅವಾಯ್ಡ್ ಮಾಡಿದ್ವಿ. ಬಂದ್ಮೇಲೆ ಏನು ಮಾಡೋದು? ಬೇಡ ಅನ್ನೋಕಾಗಲ್ಲ ಅಂತ ಬೇಗ ಗುಟ್ಟಾಗಿ ಒಳಗ್ ಕರೆಸ್ಕೊಂಡ್ವಿ. ಸ್ವಲ್ಪ ಹೊತ್ತಲ್ಲಿ ಪಾರ್ಟಿ ಜೋಶಲ್ಲಿ ಕಾರಂತ ರಂಗಗೀತೆ ಬೆರೆ ಶುರು ಹಚ್ಕೊಂಡ. ಆಮೇಲೆ ಎಲ್ರೂ ಗುಂಪಲ್ಲಿ ಹಾಡೋಕ್ ಶುರು ಮಾಡಿದ್ರು!! ನಂಗೆ ಭಯ, ಯಾರಾದರೂ ಬಂದು ಡ್ರೆಸ್ ನೋಡಿ, ಏನಂತಾರೋ, ಕೆಲಸ ಹೋದ್ರೆ ಅಂತೆಲ್ಲ ಯೋಚ್ನೆ ಬಂದಿತ್ತು. ಆದ್ರೆ ಅಲ್ಲಿದ್ದ ಸಪ್ಲೈ ಹುಡುಗ್ರು ಅದ್ನ ಎಂಜಾಯ್ ಮಾಡ್ತಿದ್ಕೆ ಸ್ವಲ್ಪ ಸಮಾಧಾನ ಆಯ್ತು. ಆದ್ರೂ ಅಧಿಕಾರಿಗಳು ನೋಡಿದ್ರೆ ಅಂತ ಭಯದಿಂದ ಹೊರಗೆ ಬಂದು ಇಣುಕಿ ನೋಡಿದ್ರೆ ಅವ್ರೂ ಕೆಲವ್ರು ಹೊರಗಡೆ ನಿಂತು ಕಿವಿ ಕೊಟ್ಟು ಕೇಳ್ತಿದ್ರು. ಕೊನೆಗೆ ನೀಟಾಗಿ ಡ್ರೆಸ್ ಮಾಡಿದ್ದ ಗೆಳೆಯರ ಗುಂಪಿನ ಮಧ್ಯನೇ ಕಾರಂತಗೆ ನಡ್ಕೊಂಡ್ ಹೋಗೋಕ್ ಹೇಳಿ ಎಲ್ರನ್ನೂ ಕಳಿಸಿಕೊಟ್ವಿ. ಆ ರಾತ್ರಿ ನಿದ್ದೆನೇ ಬರ್ಲಿಲ್ಲ’ ಅಂತ ದೊಡ್ ಸಮಸ್ಯೆಯಿಂದ ಪಾರಾದ್ ಬಗ್ಗೆ ಹೇಳಿದ್ರು.
ಹಾಗೇ ಸಿನಿಮಾ ಇಂಡಸ್ಟ್ರಿಯಲ್ಲಿನ ಒಂದು ಮೆಮೋರೇಬಲ್ ಸಂಗತಿ ಹೇಳಿದ್ರು. ಅದು ಪಿ.ಶೇಷಾದ್ರಿ ನಿರ್ದೇಶನದ ‘ಬೆಟ್ಟದ ಜೀವ’ ಸಿನಿಮಾ. ಕುಕ್ಕೆ ಸುಬ್ರಹ್ಮಣ್ಯ ಹತ್ರ ಕುಮಾರಾಧಾರ ನದಿಯಲ್ಲಿ ಒಂದು ಸೀನ್ ಇತ್ತಂತೆ. ರಾತ್ರಿ ಹೊತ್ತು ಬೇರೆ. ‘ನಾನು ಸೀನ್ ಇಂಪ್ರೂವ್ ಮಾಡೋಕೆ ಹೀಗ್ ಮಾಡೋಣ ಅಂದೆ, ಓಕೆ ಅಂದ್ರು. ಆ್ಯಕ್ಷನ್ ಹೇಳ್ತಿದ್ ಹಾಗೆ ಸ್ವಲ್ಪ ಹೊತ್ನಲ್ಲೇ ಕಾಲ್ ಜಾರಿ ನೀರಲ್ಲಿ ಮುಳುಗಿ, ಹರಿಯೋ ಕಡೆ ಹೋಗ್ತಿದ್ದೆ. ಎಲ್ರೂ ನಾನು ಆ್ಯಕ್ಟಿಂಗ್ ಮಾಡ್ತಿದೀನಿ ಅಂದ್ಕೊಂಡ್ ಸುಮ್ನಿದ್ರು. ಕೊನೆಗೆ ಅಲ್ಲೇ ಪಕ್ಕದಲ್ಲಿ ಒಂದು ಬಂಡೆ ಸಿಕ್ತು, ಅದನ್ನ ಹಿಡ್ಕೊಂಡು ಬಚಾವಾದೆ’ ಅಂದ್ರು ದತ್ತಣ್ಣ. ನಂಗೂ ಒಂದ್ ಸಿನಿಮಾದಲ್ಲಿ ಹೀಗೇ ಆಗಿತ್ತು. ಅದೂ ಆ್ಯಕ್ಷನ್ ಅಂದ್ಮೇಲೆ ಹೀಗೆಲ್ಲ ಆದ್ರೆ ಟೀಮ್ನವರು ಆ್ಯಕ್ಟಿಂಗ್ ಅಂತ ಅಂದ್ಕೊಳೋದೇ ಜಾಸ್ತಿ. ನಂದಾದ್ರೂ ಪರವಾಗಿಲ್ಲ, ಆದ್ರೆ ದತ್ತಣ್ಣಗೆ ಹಾಗಾದಾಗ ಸುಮಾರು 70 ವರ್ಷ, ಅದ್ನ ಊಹಿಸ್ಕೊಂಡಾಗ ಒಮ್ಮೆ ಮೈ ಜುಮ್ ಅನಿಸ್ತು.

ಖುಷಿ ವಿಷ್ಯ ಅಂದ್ರೆ ದತ್ತಣ್ಣಗೂ ನಂಗೂ ಕಾಮನ್ ಹಾಬೀಸ್ ಇವೆ. ಅದ್ರಲ್ಲೊಂದು ಪೇಪರ್ ಕಟ್ಟಿಂಗ್. ನಾನು ನನ್ನ ಮೊದಲ ಸಿನಿಮಾದಿಂದ ಈ ವರೆಗೆ ಪೇಪರ್ನಲ್ಲಿ ಬಂದಿರೋ ಎಲ್ಲ ಸುದ್ದಿ ಕಟ್ ಮಾಡ್ಕೊಂಡ್ ಇಟ್ಟಿದೀನಿ. ದತ್ತಣ್ಣಂಗೂ ಸೇಮ್ ಹಾಬಿ ಇದೆ. ಅವ್ರು ಆ ಹಾಬಿಯಿಂದ ಅವ್ರ ಒಂದು ಹಳೇ ಸಿನಿಮಾದ ಪ್ರೊಡ್ಯೂಸರ್ ಒಬ್ರಿಗೆ ಬೇಕಾದ ಡಿಟೇಲ್ಸ್ ಸಿಗ್ತಂತೆ. ಆದ್ರೆ ನಾನ್ ಕಲೆಕ್ಟ್ ಮಾಡ್ತಿರೋದ್ ನನ್ ಮೊಮ್ಮಕ್ಕಳಿಗೆ ತೋರ್ಸೋಕೆ. ಹಹಹ

ಈಗ ದತ್ತಣ್ಣ ಹೀಗೆ ಜುಬ್ಬಾ-ಪೈಜಾಮಾದಲ್ಲಿ ಒಳ್ಳೇ ಸಾಹಿತಿ ಥರ ಕಾಣಿಸೋದೇ ಜಾಸ್ತಿ. ನಂಗೂ ಅವ್ರು ಯಂಗ್ ಆಗಿದ್ದಾಗ ಹೆಂಗಿದ್ರು ಅಂತ ತಿಳ್ಕೊಳೋ ಕುತೂಹಲ, ಕೇಳ್ಬಿಟ್ಟೆ. ‘ಆಗ ನಾನು ಸ್ಲಿಮ್ ಆಗಿ, ಫಿಟ್ ಆಗಿದ್ದೆ. ಟಮ್ಮಿ ಇರ್ಲಿಲ್ಲ. ಸ್ಮಾರ್ಟ್ ಆಗಿದ್ದೆ’ ಅಂದ್ರು. ‘ನಿಮಗ್ ನೀವೇ ಸ್ಮಾರ್ಟ್ ಅಂತ ಹೇಳ್ಕೊಂಡ್ರೆ ಹೇಗೆ?’ ಅಂತ ತಮಾಷೆ ಮಾಡ್ದೆ. ಹೀಗೆ ಖುಷಿ ಖುಷಿಯಾಗಿ ಮಾತಾಡ್ತ ಮಂಗಳಯಾನ ಮಾಡ್ದಷ್ಟೇ ಸಂತೋಷ ಆಯ್ತು. ಇಷ್ಟು ವಿಚಾರಗಳನ್ನ ಹಂಚ್ಕೊಂಡಿದ್ಕೆ ಥ್ಯಾಂಕ್ಸ್ ದತ್ತಣ್ಣ, ಯಾವಾಗ್ಲೂ ಹೀಗೆ ನಗ್ತ, ನಗಿಸ್ತಾ ಇರಿ, ಸಿಗೋಣ ಅಂತ ಬೈ ಹೇಳ್ಕೊಂಡ್ವಿ.

ಆರೋಗ್ಯವಾಗಿ, ಆರಾಮಾಗಿ, ಎನರ್ಜೆಟಿಕ್ ಆಗಿ ಆ್ಯಕ್ಟ್ ಮಾಡೋ ದತ್ತಣ್ಣ ನಂಗೆ ಯಾವಾಗ್ಲೂ ಇನ್ಸ್ಪಿರೇಷನ್. ಅವರಿಗೆ ಅನುಭವ ಆದಷ್ಟು ನಂಗೆ ವಯಸ್ಸೇ ಆಗಿಲ್ಲ. ಅದ್ಕೆ ಅವ್ರ ಬಗ್ಗೆ ಹೆಮ್ಮೆನೂ ಅನಿಸುತ್ತೆ. ಆದ್ರೆ ಒಂದೇ ಬೇಜಾರು. ದತ್ತಣ್ಣ.. ನಿಮ್ಮನ್ನು ಹಬ್ಬಿ ಅನ್ನೋರೊಬ್ರು ಈಗ ಇರಬೇಕಿತ್ತು. ಇದ್ದಿದ್ರೆ ಈಗ್ಲೂ ‘ಎಲ್ಲ ಹಬ್ಬಿಬ್ಬಿ, ಎಲ್ಲ ಹಬ್ಬಿಬ್ಬಿ..’ ಹಹಹ.
-ಹರಿಪ್ರಿಯಾ
Wonderful information madam my darling
Awesome info about Dattanna 😊”Mayamruga” serial alli avara acting antu mesmerizing . Tumba dhanyavada madam avara bagge ishtondu info kottidira 🙂
We must hon our gelder.people